Tuesday, December 2, 2008

ನನ್ನೂರು ಬಾನುಗೊಂದಿ
ಕುಡಿದು ಕುಡಿದು ಕುಣಿದಾಡೋ ಮನುಜ, ಕುಡಿತವನರಿತವ ನಿಜಕೂ ರಾಜ ಎಂಬುದೊಂದು ನಾಣ್ಣುಡಿಯಿದೆ ಅದನ್ನ ಕುಡಿದು ಕುಣಿದಾಡೋ ನನ್ನಂಥ ಮಂಗಗಳೆಲ್ಲಾ ನಮ್ಮ ಶ್ಲೋಗನ್ ಎಂದೇ ಬಿಂಬಿಸಿದ್ದೇವೆ. ನೀವು ಬೆಂಗಳೂರಿನಿಂದ ಬರುತ್ತಿದ್ದೇರೆಂದರೆ, ಹಾಸನಕ್ಕೆ ಬಂದು ಅಲ್ಲಿಂದ ಕುಶಾಲನಗರಕ್ಕೆ ಹೋಗುವ ಬಸ್ಸಿನಲ್ಲಿ ಹತ್ತಿ ಒಂದು ಗಂಟೆ ಕಳೆದ ನಂತರ ಕೊಣನೂರು ಎಂಬ ಒಂದು ಊರು ಸಿಗುತ್ತದೆ, ಇದನ್ನು ಅಪಹಾಸ್ಯ ಮಾಡಬೇಡಿ, ನಮ್ಮ ಹಳ್ಳಿಯ ಕಥೆಗಳೇ ಹೀಗೆ, ಹುಟ್ಟುದಾಗ ಇದ್ದ, ಕಥೆಗಳೆಲ್ಲ ಹಳಸಲಾಗಿ ಮರು ಜನ್ಮ ಪಡೆದು ಅರ್ಥವೇ ಬದಲಾಗುತ್ತಾ ಹೋಗುತ್ತದೆ. ಇದಕ್ಕೆಂದು ನಾನೇನು ಉದಾಹರಣೆ ಕೊಡಬೇಕಾಗಿಲ್ಲ, ಎಲ್ಲ ಊರಿನ ಹೆಸರಿನ ಹಿಂದೆಯೂ ಒಂದೊಂದು ಇತಿಹಾಸವಿದ್ದೆ ಇರುತ್ತದೆ. ಕೊಳಲೂರು ಎಂಬುದು ಈ ಉರಿನ ಮೊದಲ ಹೆಸರು, ಊರಿನ ಉತ್ತರ ಭಾಗದಲ್ಲಿ ಕಾವೇರಿ ನದಿ ಹರಿಯುತ್ತಿದೆ, ಆ ನದಿಯ ದಂಡೆಯಲ್ಲಿ ಕೊಳಲು ಗೋಪಾಲಸ್ವಾಮಿ ದೇವಸ್ಥಾನವಿತ್ತೆಂದು ಅದರಿಂದಲೇ ಈ ಊರಿಗೆ ಈ ಹೆಸರು ಬಂತೆಂದು ಅದು ನಂತರ ಬದಲಾಯಿತೆಂದು ಹೀಗೆ ಚರಿತ್ರೆ ಶುರುವಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ಇದು ನನ್ನೂರು ಅಲ್ಲಾ ಎನ್ನುವುದನ್ನೂ ಹೇಳಲೇ ಬೇಕಾಗುತ್ತದೆ. ಇದು ನಮ್ಮೂರಿಗೆ ಏಕ ಹತ್ತಿರವಿರುವ ಏಕಮಾತ್ರ ಪಟ್ಟಣ ಪ್ರದೇಶ. ಕೊಣನೂರನ್ನು ದಾಟಿ ಕುಶಾಲನಗರದ ರಸ್ತೆ ಹಿಡಿದು ಹೋದರೆ, ಒಂದೆರಡು ಕೀ.ಮೀ.ನಲ್ಲಿ ಒಂದು ಬೋರ್ಡ್ ಕಲ್ಲು ಸಿಗುತ್ತದೆ, ಅಲ್ಲಿ ಬರೆದಿರುವುದನ್ನು ಓದಲು ನಿಮಗೆ ಸಾಧ್ಯವಿಲ್ಲವಾದ್ದರಿಂದ ಅದನ್ನು ಓದುವ ಗೋಜಿಗೆ ಹೋಗದೇ ಎಡಕ್ಕೆ ತಿರುಗಿದರೆ, ಒಂದು ದೊಡ್ಡ ಊರು ಸಿಗುತ್ತದೆ ಅದರ ಹೆಸರನ್ನು ಕಂಡು ಹಿಡಿಯುವುದು ಕಷ್ಟ ಏಕೆಂದರೇ ನಮ್ಮ ಹಳ್ಳಿಗಳಲ್ಲಿ ಶಾಲೆಯ ಮುಂದೆ ಬಿಟ್ಟರೆ ಮತ್ತೆಲ್ಲೂ ಹೆಸರು ಬರೆದಿರುವುದಿಲ್ಲ. ಬರೆಯುದೇ ಇರುವುದಕ್ಕೇ ರಹಸ್ಯವೇನೂ ಇಲ್ಲದಿದ್ದರೂ, ಊರಿನ ಪರಿಚಯವಿಲ್ಲದೇ ದಾರಿ ತಪ್ಪಿಸಿಕೊಂಡು ಇಲ್ಲಿವರೆಗೂ ಯಾರೂ ಬರುವುದಿಲ್ಲವೆಂಬ ನಂಬಿಕೆ. ಈ ಊರಿನ ಹೆಸರು ಸರಗೂರು, ನಾನು ಈ ರೀತಿ ದಾರಿಯಲ್ಲಿ ಸಿಕ್ಕ ಸಿಕ್ಕ ಊರಿನ ಪರಿಚಯ ಮಾಡುತ್ತ ಕುಳಿತರೇ, ನನ್ನೂರಿನ ಪರಿಚಯ ಬರುವ ವೇಳೆಗೆ ನೀವು ಎದ್ದೇ ಹೋಗಿ ಬಿಡುತ್ತೀರಾ ಅಷ್ಟೇ. ಸರಗೂರಿನಿಂದ ಎರಡು ಕಿಲೋಮೀಟರ್ ನಡೆದು ಎಡಕ್ಕೆ ತಿರುಗಿ ನಡೆದು ಒಂದು ಇಳಿಜಾರು ಇಳಿದರೇ ಅಲ್ಲಿ ಕಾಣುವುದೇ ನನ್ನೂರು, ಊರಿಗೆ ಹೋಗುವ ಸರದಿಯಲ್ಲಿ ಒಂದೆರಡು ಅಡಿಕೆ ತೋಟಗಳು ಸಿಗುವುದರಿಂದ, ಓ ಊರು ಚೆನ್ನಾಗಿದೆ ಅನ್ನಿಸುತ್ತದೆ, ಚೆನ್ನಾಗಿಯೂ ಇದೆ ಎನ್ನಿ. ಹಾಗೆಯೇ ಸ್ವಲ್ಪ ಮುಂದುವರೆದರೇ ನಮ್ಮೂರ ಶಾಲೆ ಎದುರಾಗುತ್ತದೆ, ಅಲ್ಲಿಯೇ ನೀವು ನಮ್ಮೂರಿನ ಹೆಸರು ಓದಬಹುದು, ಸರಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆ, ಬಾನುಗೊಂದಿ, ಹಾಸನ ಜಿಲ್ಲೆ. ಅದಕ್ಕಿಂತ ದೊಡ್ಡದಾಗಿ ಕಾಣುವುದು ಆ ಬೋರ್ಡ ಬರೆಸಿಕೊಟ್ಟ ದಾನಿಗಳ ಹೆಸರು, ನಮ್ಮಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುವ ದೃಶ್ಯವಿದು. ದೇವಸ್ಥಾನದಲ್ಲಿ, ದಾನ ಕೊಟ್ಟ ಫ್ಯಾನ್ ಗಳಲ್ಲಿ, ಗಂಟೆಗಳ ಮೇಲೆ, ಏನೇ ದಾನ ಕೊಟ್ಟಿದ್ದರೂ, ಕೊಡುಗೆಯೆಂದು ಅವರ ಮನೆತನದಿಂದ ಹಿಡಿದು ಮೊಮ್ಮಕ್ಕಳವರೆಗೂ ಅವರೆಲ್ಲ ಹೆಸರನ್ನು ಬರೆಸಿಲ್ಲವೆಂದರೇ ಅವರಿಗೆ ಸಮಧಾನವಿಲ್ಲ. ಇನ್ನೂ ಶಾಲೆಯ ಒಳಕ್ಕೆ ಹೋದರೇ, ಮುಗಿದೇ ಹೋಯಿತು, ನೀರು ಕುಡಿಯುವ ಲೋಟದಿಂದ ಹಿಡಿದು ತೂಗಾಡುವ ಗಡಿಯಾರದವರೆಗೂ ಎಲ್ಲದರ ಮೇಲೂ ದಾನಿಗಳ, ಕೊಡುಗೆಗಳ ಹೆಸರಿದೆ, ಮೇಜು, ಕುರ್ಚಿ, ಬೀರು, ಹೀಗೆ ಯಾವೊಂದನ್ನೂ ಹೊರೆತು ಪಡಿಸುವ ಹಾಗಿಲ್ಲ. ಅದರ ಪಕ್ಕದಲ್ಲೇ ಇರುವ ನಮ್ಮೂರ ಮದುವೆ ಮಂಟಪ ನೋಡಿದರೆ ಅದರ ವಿಸ್ತೀರ್ಣ ನಿಮಗೆ ಅರ್ಥವಾಗುತ್ತದೆ. ಎಲ್ಲಾ ಫ್ಯಾನಿನ ರೆಕ್ಕೆಯ ಮೇಲೂ ಕೊಡುಗೈ ದಾನಿಗಳ ಹೆಸರಿದೆ. ಇನ್ನು ಎಡಕ್ಕೆ ತಿರುಗಿ ನಡೆದರೆ ನಮ್ಮೂರಿನ ಒಳಕ್ಕೆ ಹೋಗಬಹುದು. ಊರಿನಲ್ಲಿ ಒಟ್ಟು, ೧೮೭ ಮನೆಗಳಿವೆ, ಒಕ್ಕಲಿಗರೇ ಹೆಚ್ಚಿರುವ ಈ ಊರಿನಲ್ಲಿ, ಮಡಿವಾಳರೂ, ನಾಯಕರೂ, ಮತ್ತು ಹರಿಜನ ಜಾತಿಗೆ ಸೇರಿದ ಒಂದಿಪ್ಪತ್ತು ಮನೆಗಳಿವೆ.

ನಮ್ಮೂರಿನ ನಕ್ಷೆ ನಿಮಗೆ ಹೇಳಿಬಿಡ್ತಿನಿ, ಆಮೇಲೆ ಜನರ ಬಗ್ಗೆ ಹೇಳ್ತಿನಿ. ನಮ್ಮೂರನ್ನು ಒಂದು ಗೋಳಾಕರದಲ್ಲಿದೆ ಅಂತಾ ತಿಳಿದುಕೊಳ್ಳಿ, ಪಶ್ಚಿಮದಿಕ್ಕಿನಿಂದ ಊರಿಗೆ ಪ್ರವೇಶಿಸಿ ಹೊರಟರೆ ಬಲಕ್ಕೆ ಹರಿಜನರ ಮನೆಗಳು ಸಿಗುತ್ತವೆ, ನಂತರ ಎಡಕ್ಕು ಬಲಕ್ಕೂ ಒಂದೆ ಸಮನೆ ಚೂರು ಜಾಗವನ್ನು ಬಿಡದೆ ಕಟ್ಟಿರುವ ಸಣ್ಣ ಉದ್ದಕ್ಕು ಹಿಂದಕ್ಕೆ ಹೋಗಿರುವ ಮನೆಗಳು ಸಿಗುತ್ತವೆ. ಸಾಮಾನ್ಯವಾಗಿ ಎಲ್ಲ ಮನೆಯ ಮುಂದೆಯೂ ಇರುವ ಜಗಲಿಯ ಮೇಲೆ ವಯಸ್ಸಾದ ಅಜ್ಜಿಯರು ಕುಳಿತಿರುವುದು ಕಾಣಸಿಗುತ್ತದೆ. ನಮ್ಮೂರಿನಲ್ಲಿರುವುದು ಮೂರು ಮುತ್ತಿನ ಅಂಗಡಿಗಳು, ಒಂದೊಂದು ಒಂದೊಂದು ಪಕ್ಷಕ್ಕೆ ಸೇರುತ್ತದೆ. ಬಿ.ಜೆ.ಪಿ., ದಳ, ಕಾಂಗ್ರೇಸ್ ಆದ್ದರಿಂದ ತಾವು ಯಾವ ಅಂಗಡಿಯ ಮುಂದೆ ನಿಂತು ಮಾತನಾಡುತ್ತಿದ್ದೀರೆಂಬುದು ಮುಖ್ಯ. ಇಂದಿನ ಎಲ್ಲ ಹಳ್ಳಿಗಳಲ್ಲು ಕಂಡುಬರುವ ಈ ವಿಚಿತ್ರಗಳು ಹಳ್ಳಿಗರಿಗೇ ಸಾಮಾನ್ಯವೆನಿಸುತ್ತದೆ, ಹೊರಗಿನವರಿಗೆ ಇದೊಂದು ಕೌತುಕವೆನಿಸಿದರೂ ಸರಿಯೆ. ಆದರೇ ನಾನು ಯಾವ ಪಕ್ಷಕ್ಕೂ ನನ್ನ ಬೆಂಬಲವನ್ನು ಘೋಷಿಸದೆ ಇರುವುದರಿಂದ ನಾನು ಯಾವ ಅಂಗಡಿಯ ಮುಂದೆಯೂ ಕಾಣಸಿಗುವುದಿಲ್ಲವೇ ಸರಿ. ನಾನು ಘೋಷಿಸಿಲ್ಲ ಎಂಬುವುದಕ್ಕಿಂತ ಅವರು ನನ್ನನ್ನು ಸೇರಿಸಿಕೊಂಡಿಲ್ಲ. ನಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಕೆಲವೊಂದು ದೇಶಾಭಿಮಾನಿ ದೊರೆಗಳಿಗೆ ಬೇಸರ ತರಿಸಬಹುದು, ಆದರೂ, ನಾನು ಹೇಳುವುದನ್ನ ಹೇಳುತ್ತಲೇ ಇರುತ್ತೇನೆ. ನಾನು ಕಾಣದ ದೇಶಪ್ರೇಮವೇನಲ್ಲ ಸಾಕು ಸುಮ್ಮನಿರಿ ಅಂತಾ ಹೇಳುತ್ತಲೂ ಇದ್ದೆನೆ.

ಹೀಗೆ ಊರಿನ್ನು ಬಿಟ್ಟು, ಹೊರಕ್ಕೆ ಅರ್ಧ ಕಿಲೋಮೀಟರ್ ನಡೆದರೆ, ಒಂದು ಬಿಳಿ ಬಣ್ಣದ ಒಂಟಿ ಮನೆ ಕಾಣುತ್ತದೆ, ಅದೇ ನಮ್ಮ ಮನೆ. ಜೋರಾಗಿ ನಮ್ಮ ಮನೆ ಅನ್ನೊ ಹಾಗೆ ಇಲ್ಲ, ನಮ್ಮಪ್ಪ ಬೈತಾರೆ, ಇವನೇನು ದುಡಿದಿಲ್ಲ, ನಮ್ಮಪ್ಪನ ಹತ್ತಿರನೂ ಬಂದಿರಲಿಲ್ಲ, ನಾನು ಸಂಪಾದನೆ ಮಾಡಿದ್ದು ಅಂತಾ.
ನಮ್ಮ ದೇಶದ ಮಟ್ಟದಲ್ಲಿಯೂ ಅಷ್ಟೆ, ಇದನ್ನಾ ನೀವು ಗಮನಿಸುತ್ತಲೇ ಇರುತ್ತೀರಿ, ನಮ್ಮ ದೇಶ, ನಮ್ಮ ಧರ್ಮ, ನಮ್ಮ ಜಾತಿ, ಹೀಗೆ ಎಲ್ಲವೂ ನಮ್ಮದು ನಮ್ಮದು ಎಂದು ಘೋಷಿಸುವವರನ್ನ ಒಮ್ಮೆ ಹಿಡಿದು ಕೇಳಿ, ನಿನ್ನ ಧರ್ಮದ ಬಗ್ಗೆ ಸ್ವಲ್ಪ ನನಗೂ ತಿಳಿಸು ಎಂದು, ನಿನ್ನ ದೇಶದ ಸ್ತಿತಿಗತಿ ಹೇಳು ಎಂದು ಇಲ್ಲ ಅವನಲ್ಲಿ ಉತ್ತರವಿರುವುದಿಲ್ಲ. ಅವನಲ್ಲೇ ಅಲ್ಲಾ, ನಮ್ಮನ್ನು ಆಳುತ್ತಿರುವ ಮಹಾಮಣಿಗಳಲ್ಲೂ ಇರುವುದಿಲ್ಲ, ಎಲ್ಲರೂ ಭೂತಕಾಲವನ್ನೆ ಜಪಿಸುತ್ತಾ ನಿನಗೆ ಗೊತ್ತಾ, ನಮ್ಮ ತಾತನಿಗೆ ೩೦೦ ಎಕರೆ ತೆಂಗಿತ್ತಂತೆ, ೫೦೦ ಎಕರೆ ಅದು ಇತ್ತಂತೆ, ಅಂತಾ ಅವನ ಕುಟುಂಬದ ಇತಿಹಾಸ ಬಿಚ್ಚುತ್ತಾನೆ. ದೇಶಾಭಿಮಾನಿಗಳು ಅಷ್ಟೆ, ಗಾಂಧಿಯುಗವನ್ನೆ ಹೊಗಳುತ್ತಾ ನಾವು ದಾನ ಮಾಡಿದ ಪಾಕಿಸ್ತಾನವೆಂದು, ಧರ್ಮಾಂದರದ್ದು ಇದೇ ಗೋಳು, ಅವರು ವರ್ತಮಾನವನ್ನು ಅರಗಿಸಿಕೊಳ್ಳಲು ಸಿದ್ದವೇ ಇಲ್ಲ. ಅಳಲೆ ಕಾಯಿ ಪಂಡಿತನೂ ಅಷ್ಟೇ, ತನ್ನ ಮನೆಯ ಪಕ್ಕದ ಅಂಗಡಿಗೆ ಬಂದ ಜೆಂಡು ಬಾಮ್, ಬಗ್ಗೆ ಯೋಚಿಸುವುದನ್ನು ಬಿಟ್ಟು ಅದೆಲ್ಲಾ ಏನ್ ಮಾಡುತ್ತೆ ಅನ್ನೋ ಉಡಾಫೆತನ ತೋರಿಸುತ್ತಾನೆ. ಅವನು ಚರಕ ಸುಷೃತರ ಕಥೆ ಹೇಳತೊಡಗುತ್ತಾನೆ.